ಗಣಿ ಕಾರ್ಮಿಕ ಎಂದರೆ ಭೂಮಿಯ ಮೇಲೆ ಅಥವಾ ಒಳಗೆ ಇರುವ ಪ್ರಕೃತಿದತ್ತವಾದ ಖನಿಜ ಮತ್ತು ಇತರ ಸ್ವಾಭಾವಿಕ ಸಂಪತ್ತನ್ನು ಹೊರಕ್ಕೆ ತೆಗೆಯುವ ಕಾರ್ಯದಲ್ಲಿ ನೆರವಾಗಲು ಕೂಲಿಯ ಆಧಾರದ ಮೇಲೆ ನೇಮಕ ಹೊಂದುವ ದುಡಿಮೆಗಾರ. ಗಣಿ ಕಾರ್ಮಿಕನೆಂದರೆ ಬಂಡೆಯ ಪದರದ ಮುಖದಲ್ಲಿ ಕೆಲಸ ಮಾಡುವ ಯಾವುದೇ ವ್ಯಕ್ತಿ; ಬಂಡೆಯನ್ನು ಕತ್ತರಿಸುವ, ಸ್ಫೋಟಿಸುವ ಅಥವಾ ಒಡೆದು ತೆಗೆಯುವ ವ್ಯಕ್ತಿ. ಹೆಚ್ಚು ವಿಶಾಲ ಅರ್ಥದಲ್ಲಿ, ಗಣಿ ಕಾರ್ಮಿಕನೆಂದರೆ ಗಣಿಯಲ್ಲಿ ಕೆಲಸ ಮಾಡುವ ಯಾವುದೇ ವ್ಯಕ್ತಿ, ಕೇವಲ ಬಂಡೆಯ ಪದರ ಮುಖದಲ್ಲಿ ಕೆಲಸ ಮಾಡುವವನಲ್ಲ. ಕೃಷಿಯಂತೆ ಗಣಿ ಉದ್ಯಮವೂ ಪುರಾತನವಾದದ್ದು. ಹತ್ತೊಂಬತ್ತನೆಯ ಶತಮಾನಕ್ಕೆ ಮುಂಚೆ ಗಣಿಗಾರಿಕೆ ಅಲ್ಪಗಾತ್ರದ ಉದ್ಯಮವಾಗಿದ್ದು ಅದರಲ್ಲಿದ್ದ ಕಾರ್ಮಿಕರ ಸಂಖ್ಯೆ ಕಡಿಮೆಯಾಗಿರುತ್ತಿತ್ತು. ಆದರೆ ಕೈಗಾರಿಕಾ ಕ್ರಾಂತಿಯಿಂದಲೂ, 20ನೆಯ ಶತಮಾನದ ಪ್ರಥಮಾರ್ಧದಲ್ಲಿ ಉಂಟಾದ ಎರಡು ಮಹಾಯುದ್ಧಗಳಿಂದಾಗಿಯೂ, ವಿಶ್ವರಾಷ್ಟ್ರಗಳ ಆರ್ಥಿಕ ಬೆಳವಣಿಗೆಯಿಂದಾಗಿಯೂ ಖನಿಜಗಳಿಗಾಗಿ ಬೇಡಿಕೆ ಬಹಳ ಅಧಿಕವಾದ್ದರಿಂದ ಗಣಿ ಉದ್ಯಮ ಬೃಹದ್ಗಾತ್ರದ ಉದ್ಯಮವಾಗಿ ಪರಿವರ್ತನೆ ಹೊಂದಿ ಗಣಿ ಕಾರ್ಮಿಕರ ಸಂಖ್ಯೆಯೂ ಅನೇಕ ಪಟ್ಟು ಹೆಚ್ಚಾಯಿತು. ಇಂದು ಗಣಿ ಉದ್ಯಮದಲ್ಲಿ ಯಾಂತ್ರೀಕರಣ ಬಹಳವಾಗಿ ಬಳಕೆಗೆ ಬಂದಿದ್ದರೂ ಗಣಿ ಕಾರ್ಮಿಕರ ಸಂಖ್ಯೆ ಕುಗ್ಗಿಲ್ಲ. == ವಿಶಿಷ್ಟವಾದ ಉದ್ಯಮ == ಗಣಿ ಕಾರ್ಮಿಕರು ಕೃಷಿ ಮತ್ತು ಕೈಗಾರಿಕಾ ಉದ್ಯಮಗಳಲ್ಲಿಯ ಕಾರ್ಮಿಕರಂತಲ್ಲ. ಅವರ ವೈಶಿಷ್ಟ್ಯ, ಅವರು ಕೆಲಸ ಮಾಡುವ ಸ್ಥಳ, ಅವರ ಕೆಲಸದ ಲಕ್ಷಣ ಇವು ಅವರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ. ಗಣಿಗಳನ್ನು ತೋಡುವುದಕ್ಕೆ ಉಪಯೋಗಿಸುವ ಸ್ಫೋಟಕ ವಸ್ತುಗಳನ್ನು ಉಪಯೋಗಿಸುವುದರಿಂದ ಹಿಡಿದು, ಅದುರನ್ನು ಹೊರಕ್ಕೆ ತೆಗೆಯುವವರೆಗೆ ಗಣಿಯಲ್ಲಿಯ ಎಲ್ಲ ಕೆಲಸಗಳಿಗೂ ನೈಪುಣ್ಯ ಇರಬೇಕಾದ್ದರಿಂದ ಗಣಿ ಕಾರ್ಮಿಕರು ತಂತಮ್ಮ ಕೆಲಸಗಳಲ್ಲಿ ಅನುಭವ ಹೊಂದಿದವರಾಗಿರಬೇಕು. ಗಣಿ ಕಾರ್ಮಿಕರಿಗೆ ಇತರ ಉದ್ಯಮಗಳಲ್ಲಿಯ ಕಾರ್ಮಿಕರ ಸಂಪರ್ಕ ಹೆಚ್ಚಾಗಿರುವುದಿಲ್ಲ. ಅವರು ವಿಶೇಷವಾಗಿ ಭೂಮಿಯಡಿಯಲ್ಲಿ ಕೆಲಸ ಮಾಡುತ್ತಾರೆ. ಗಣಿಯೊಳಗೆ ಕೆಲಸ ಮಾಡುವ ಕಾರ್ಮಿಕರ ಸಂಖ್ಯೆ ಒಟ್ಟು ಗಣಿ ಕಾರ್ಮಿಕರ ಸಂಖ್ಯೆಯ ಶೇಕಡ 60-70 ರಷ್ಟಿರುತ್ತದೆ. ಸಾಮಾನ್ಯವಾಗಿ ಎಲ್ಲ ದೇಶಗಳಲ್ಲೂ ಗಣಿಯೊಳಗಡೆ ಹೆಂಗಸರು ಮತ್ತು ಮಕ್ಕಳನ್ನು ಕೆಲಸಕ್ಕೆ ನೇಮಿಸುವುದನ್ನು ನಿಷೇಧಿಸಲಾಗಿದೆ. ಭೂಮಿಯೊಳಗಡೆ, ಕತ್ತಲೆಯಲ್ಲಿ, ಗಾಳಿ ಸಂಚಾರವಿಲ್ಲದಿರುವಲ್ಲಿ ಹಾಗೂ ಅಧಿಕ ಉಷ್ಣತೆಯಲ್ಲಿ ಕೆಲಸ ಮಾಡುವುದು ಶ್ರಮದಾಯಕವಾದದ್ದು. ಜೊತೆಗೆ ಅದು ಅಪಾಯಕಾರಿಯೂ ಹೌದು. ಗಣಿಗಳಲ್ಲಿ ವಿಷವಾಯು ಉತ್ಪಾದನೆ, ಸ್ಫೋಟಗಳು ಉಸಿರು ಕಟ್ಟುವುದು, ವಿಪರೀತ ತಾಪಮಾನ, ಭೂಕುಸಿತ ಇತ್ಯಾದಿ ಘಟನೆಗಳು ಆಗಾಗ್ಗೆ ಸಂಭವಿಸುತ್ತಲೇ ಇರುತ್ತವೆ. ಅದರಿಂದ ಗಣಿ ಕಾರ್ಮಿಕರು ಸಾವು ನೋವುಗಳಿಗೆ ಈಡಾಗುವುದುಂಟು. ಅನೇಕ ಗಣಿಗಳಲ್ಲಿ ಕಾರ್ಮಿಕರು ಪ್ರತಿ ನಿಮಿಷವೂ ಸಾವನ್ನು ಎದುರು ನೋಡುತ್ತ ಕೆಲಸದಲ್ಲಿ ನಿರತರಾಗಿರುತ್ತಾರೆ. ಇತ್ತೀಚೆಗೆ ಪ್ರತಿಯೊಂದು ದೇಶದಲ್ಲೂ ಸರ್ಕಾರ ಮತ್ತು ಗಣಿ ಮಾಲೀಕರು ಕಾರ್ಮಿಕರ ರಕ್ಷಣೆಗಾಗಿ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವುದರಿಂದ ಅಪಘಾತಗಳ ಸಂಖ್ಯೆ ಇಳಿಯುತ್ತಿದೆ. ಆದರೂ ಅವನ್ನು ಸಂಪೂರ್ಣವಾಗಿ ತಡೆಗಟ್ಟಲಾಗಿಲ್ಲ. ಗಣಿಗಳಲ್ಲಿಯ ಅಪಘಾತಗಳ ಭೀಕರ ಪರಿಣಾಮವನ್ನು ತಗ್ಗಿಸಲು ಕೈಗೊಂಡಿರುವ ಮುಂಜಾಗ್ರತೆ ಕ್ರಮಗಳಲ್ಲಿ ಅಪಘಾತ ವಿಮೆ ಮುಖ್ಯವಾದದ್ದು. ಗಣಿ ಕೆಲಸ ಕೆಲವು ಆರ್ಥಿಕ ಮತ್ತು ಸಾಮಾಜಿಕ ವೈಲಕ್ಷಣ್ಯಗಳಿಂದ ಕೂಡಿದ್ದು, ಗಣಿ ಕಾರ್ಮಿಕರಿಗೆ ಇತರ ಎಲ್ಲ ಉದ್ಯಮಗಳ ಕಾರ್ಮಿಕರಿಗಿಂತ ಹೆಚ್ಚು ವೇತನ ಮತ್ತು ಸೌಲಭ್ಯಗಳನ್ನೊದಗಿಸಿ ಅವರನ್ನು ಆಕರ್ಷಿಸಬೇಕಾಗುತ್ತದೆ. ಗಣಿ ಉದ್ಯಮದಲ್ಲಿ ಕಾರ್ಮಿಕರ ಸರಬರಾಯಿ ಮತ್ತು ಬೇಡಿಕೆಗಳನ್ನು ಸರಿದೂಗಿಸುವುದು ಅನೇಕ ವೇಳೆ ಕಷ್ಟ. ಈ ಮಾತು ಗಣಿ ಉದ್ಯಮವಿರುವ ಎಲ್ಲ ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅನ್ವಯಿಸುತ್ತದೆ. ಗಣಿ ಕಾರ್ಮಿಕರು ಅತ್ಯಂತ ಪ್ರತಿಕೂಲಕರ ಸನ್ನಿವೇಶದಲ್ಲಿ ಕೆಲಸ ಮಾಡುವುದರಿಂದ ಅವರಲ್ಲಿ ಜೀವದ ಹಾಗೂ ಜೀವನದ ಮೇಲಿನ ವ್ಯಾಮೋಹ ಅಷ್ಟಾಗಿ ಇರದೆ ಒಂದು ವಿಧವಾದ ಅಸಡ್ಡೆಯ ಮನೋಭಾವ ಉಂಟಾಗುವುದು ಸಹಜ. ಇದರಿಂದಾಗಿ ಅವರು ಸಾಮಾಜಿಕ ದೃಷ್ಟಿಯಿಂದ ಅನಪೇಕ್ಷಣೀಯವೆಂದು ಪರಿಗಣಿಸಲಾದ - ಉದಾಹರಣೆಗೆ ಮದ್ಯಪಾನ, ಜೂಜು ಮುಂತಾದ- ಚಟುವಟಿಕೆಗಳಲ್ಲಿ ನಿರತರಾಗುವುದುಂಟು. ಅಷ್ಟೇ ಅಲ್ಲದೆ ಗಣಿ ಕಾರ್ಮಿಕರು ಸೀಮಿತ ಸ್ಥಳಗಳಲ್ಲಿ ಹೆಚ್ಚು ಸಂಖ್ಯೆಗಳಲ್ಲಿ ಕೆಲಸ ಮಾಡುವುದರಿಂದ ಕೃಷಿ ಕಾರ್ಮಿಕರಿಗಿಂತಲೂ ಅವರಲ್ಲಿ ಸಂಘಟನೆಯ ಶಕ್ತಿ ಮಿಗಿಲಾಗಿರುತ್ತದೆ. ಗಣಿ ಕಾರ್ಮಿಕರ ಸಂಘಗಳು ಕೃಷಿ ಕಾರ್ಮಿಕರ ಸಂಘಗಳಿಗಿಂತಲೂ ಬಲಿಷ್ಠವಾಗಿರುತ್ತವೆ. ಸಾಮಾನ್ಯವಾಗಿ ಗಣಿ ಕಾರ್ಮಿಕರಲ್ಲಿ ತೀವ್ರವಾದಿಗಳೇ ಹೆಚ್ಚು ಸಂಖ್ಯೆಯಲ್ಲಿ ಇರುವುದುಂಟು. == ಗಣಿ ಕಾರ್ಮಿಕರ ಕಾನೂನುಗಳು == ಮೇಲಿನ ಎಲ್ಲ ಕಾರಣಗಳಿಂದಾಗಿ ಗಣಿ ಕಾರ್ಮಿಕರನ್ನು ವಿಶ್ವದ ಎಲ್ಲ ದೇಶಗಳಲ್ಲೂ ಇತರ ಕಾರ್ಮಿಕ ವರ್ಗಗಳಿಂದ ಪ್ರತ್ಯೇಕಿಸಿ, ಅವರಿಗೆ ಅನ್ವಯವಾಗುವಂತೆ ಪ್ರತ್ಯೇಕವಾದ ಕಾರ್ಮಿಕ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಈ ಕಾನೂನುಗಳು ಗಣಿ ಕಾರ್ಮಿಕರ ಕ್ಷೇಮಾಭಿವೃದ್ಧಿಯನ್ನೇ ಮೂಲ ಉದ್ದೇಶವಾಗಿಟ್ಟುಕೊಂಡು, ಅವರು ತಮ್ಮ ಜೀವನದಲ್ಲಿ ಹತಾಶ ಮನೋಭಾವ ತೊರೆದು ತಮ್ಮ ಉದ್ಯಮದಲ್ಲಿ ದಕ್ಷತೆಯಿಂದ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿವೆ. ಅಮೆರಿಕ, ಗ್ರೇಟ್ ಬ್ರಿಟನ್, ಜರ್ಮನಿ ಮುಂತಾದ ದೇಶಗಳಲ್ಲಿ ಪ್ರತ್ಯೇಕ ಗಣಿ ಕಾರ್ಮಿಕ ಕಾಯಿದೆಗಳು ಬಹಳ ಹಿಂದಿನಿಂದಲೂ ಜಾರಿಯಲ್ಲಿವೆ. === ಭಾರತದಲ್ಲಿ === ಭಾರತದಂಥ ದೇಶಗಳಲ್ಲಿ ಅವು ಇತ್ತೀಚಿನ ವರ್ಷಗಳಲ್ಲಿ ಜಾರಿಗೆ ಬಂದಿವೆ. ಭಾರತದಲ್ಲಿ 1901ರಲ್ಲಿ ಭಾರತದ ಗಣಿಗಳ ಕಾಯಿದೆ ಮೊದಲು ಜಾರಿಗೆ ಬಂತು. ಗಣಿಗಳೊಳಗೆ ಕೆಲವು ಸುರಕ್ಷತಾ ಕ್ರಮಗಳನ್ನು ಜಾರಿಗೆ ತರುವುದೇ ಈ ಕಾಯಿದೆಯ ಮುಖ್ಯ ಉದ್ದೇಶವಾಗಿತ್ತು. ಇದರ ಹಲವಾರು ನ್ಯೂನತೆಗಳನ್ನು ಹೋಗಲಾಡಿಸಿ ಗಣಿ ಕಾರ್ಮಿಕರ ಕ್ಷೇಮಾಭಿವೃದ್ದಿ ಸಾಧಿಸುವ ದೃಷ್ಟಿಯಿಂದ ಒಂದು ಸಮಗ್ರ ಗಣಿ ಕಾಯಿದೆಯನ್ನು ಜಾರಿಗೆ ತರುವುದಕ್ಕಾಗಿ ಭಾರತ ಸರ್ಕಾರ ಅನೇಕ ಸಲ - ಎಂದರೆ 1919, 1935, 1949, 1951 ಮತ್ತು 1959ರಲ್ಲಿ-ಗಣಿಗಳ ಕಾಯಿದೆಯನ್ನು ಪರಿಷ್ಕರಿಸಿತು. 1959ರ ಭಾರತದ ಗಣಿಗಳ ಕಾಯಿದೆ ಹೆಚ್ಚು ವ್ಯಾಪಕವಾದ್ದು. ಇದರಲ್ಲಿ ಅನೇಕ ಸುಧಾರಣಾ ಮತ್ತು ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆ. ಹೆಂಗಸರು, 15 ವರ್ಷಗಳೊಳಗಿರುವ ಮಕ್ಕಳು- ಇವರನ್ನು ಗಣಿಯೊಳಗೆ ಕೆಲಸಕ್ಕೆ ನೇಮಿಸುವುದನ್ನು ನಿಷೇಧಿಸಲಾಗಿದೆ. ಹೆಂಗಸರನ್ನು ರಾತ್ರಿಯ ವೇಳೆಯಲ್ಲಿ ಗಣಿಯ ಹೊರಗಿನ ಕೆಲಸದಲ್ಲಿ ನೇಮಿಸುವುದನ್ನು ನಿಷೇಧಿಸಲಾಗಿದೆ. ವಾರಕ್ಕೆ ಒಟ್ಟು 48 ಗಂಟೆಗಳ ಕಾಲ ಕೆಲಸ- ಎಂದರೆ ನಡುವೆ ದಿನಕ್ಕೆ ಕನಿಷ್ಠ ಅರ್ಧ ಗಂಟೆ ವಿರಾಮವೂ ಸೇರಿ ಗಣಿಯೊಳಗಿನ ಕಾರ್ಮಿಕರಿಗೆ ದಿನಕ್ಕೆ 8 ಗಂಟೆಯಂತೆಯೂ, ಗಣಿಯ ಮೇಲಿನ ಕಾರ್ಮಿಕರಿಗೆ ದಿನಕ್ಕೆ 9 ಗಂಟೆಯಂತೆಯೂ ಕೆಲಸದ ವೇಳೆಯನ್ನು ನಿರ್ಧರಿಸಲಾಗಿದೆ. ವಾರದ ರಜಾ ದಿನದ ಜೊತೆಗೆ ಇತರ ರಜಾ ಸೌಲಭ್ಯಗಳುಂಟು. 1948ರ ಕಾರ್ಖಾನೆ ಕಾಯಿದೆಯ ಮಾದರಿಯಲ್ಲಿ ಗಣಿ ಕಾರ್ಮಿಕರಿಗೂ ಸುರಕ್ಷತೆ, ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿಯನ್ನು ಉತ್ತೇಜಿಸುವ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿಧಿಸಲಾಗಿದೆ. ಗಣಿ ಕಾರ್ಮಿಕರಿಗೆ ಉಪಾಹಾರ ಗೃಹ, ಶಿಶುಪಾಲನಾ ಗೃಹ, ಸ್ನಾನ ಗೃಹ, ಆಂಬ್ಯುಲೆನ್ಸ್, ಪ್ರಥಮ ಚಿಕಿತ್ಸೆಯ ಕೊಠಡಿ ಮುಂತಾದ ಸೌಕರ್ಯಗಳನ್ನೊದಗಿಸಬೇಕು. ಈ ಕ್ರಮಗಳನ್ನೆಲ್ಲ ಗಣಿ ಕಾರ್ಮಿಕರ ಹಿತದೃಷ್ಟಿಯಿಂದ ಜಾರಿಗೆ ತರಲು 1959ರ ಭಾರತದ ಗಣಿಗಳ ಕಾಯಿದೆ ಗಣಿ ಮಾಲೀಕರನ್ನು ಒತ್ತಾಯಪಡಿಸುತ್ತದೆ. ಗಣಿ ಕಾರ್ಮಿಕರಿಗೆಲ್ಲ ಸಾಮೂಹಿಕವಾಗಿ ಅನ್ವಯಿಸುವ ಭಾರತದ ಗಣಿಗಳ ಕಾಯಿದೆಯ ಜೊತೆಗೆ ಬೇರೆ ಬೇರೆ ಗಣಿಗಳ ಕಾರ್ಮಿಕರಿಗೆ ವಿಶಿಷ್ಟವಾಗಿ ಅನ್ವಯಿಸುವ ಕೆಲವು ಪ್ರತ್ಯೇಕ ಗಣಿ ಕಾಯಿದೆಗಳೂ ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಜಾರಿಗೆ ಬಂದಿವೆ. ಉದಾಹರಣೆಗಾಗಿ, ಅಭ್ರಕ ಗಣಿ ಕಾರ್ಮಿಕರ ಯೋಗಕ್ಷೇಮ ಕಾಯಿದೆ (1946), ಕಲ್ಲಿದ್ದಲು ಗಣಿ ಕಾರ್ಮಿಕರ ಯೋಗಕ್ಷೇಮ ಕಾಯಿದೆ (1947), ಕಬ್ಬಿಣ ಅದುರು ಗಣಿ ಕಾರ್ಮಿಕರ ಯೋಗಕ್ಷೇಮ ಕಾಯಿದೆ (1947), ಕಬ್ಬಿಣ ಅದುರು ಗಣಿ ಕಾರ್ಮಿಕರ ಯೋಗಕ್ಷೇಮ ತೆರಿಗೆ ಕಾಯಿದೆ (1961)- ಇವು ಆಯಾ ಗಣಿ ಕಾರ್ಮಿಕರ ವಸತಿ ಸೌಕರ್ಯ, ವಿದ್ಯಾಭ್ಯಾಸ, ಮನೋರಂಜನೆ, ಸಾಂಸ್ಕೃತಿಕ ಚಟುವಟಿಕೆಗಳು ಮುಂತಾದ ಕಾರ್ಮಿಕ ಕ್ಷೇಮಾಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲು, ಆವಶ್ಯಕವಾದ ನಿಧಿಯನ್ನು ಸ್ಥಾಪಿಸಲು ಅವಕಾಶ ಮಾಡಿಕೊಟ್ಟಿವೆ. ಇವೆಲ್ಲ ಪಾಶ್ಚಾತ್ಯ ದೇಶಗಳಲ್ಲಿರುವಂತೆ ಭಾರತದಲ್ಲೂ ಗಣಿಕಾರ್ಮಿಕರ ಕ್ಷೇಮಸಾಧನೆಯ ಸಲುವಾಗಿ ಕೈಗೊಂಡಿರುವ ಪ್ರಯತ್ನಗಳಾಗಿವೆ. ಇಂದು ಗಣಿ ಕಾರ್ಮಿಕರ ಹಿತಸಾಧನೆಯಲ್ಲಿ ಸರ್ಕಾರ ದೃಢವಾದ ಆಸಕ್ತಿ ತಳೆದಿದೆ. == ಉಲ್ಲೇಖಗಳು ==